Reaching out to others! Free & Open Source Software, Kannada, L10n, L18n Data Science, Cloud Computing & more…

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು…

… ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

 

ಮಂಗಳನ ಅಂಗಳಕೆ ಇಣುಕು ನೋಟ

ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ?

ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ… ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ.  ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ ಕೆಂಬಣ್ಣದ, ನಕ್ಷತ್ರದಂತೆ ಕಾಣುವ  ಉದಯಿಸುತ್ತಿರುವ ಮಂಗಳನನ್ನು ಕಾಣಬಹುದಾಗಿದೆ.

ಇಂದು ರಾತ್ರಿ ಮಂಗಳ ಭೂಮಿಗೆ ೬೧ ಮಿಲಿಯನ್ ಮೈಲುಗಳಷ್ಟು ಬಳಿಸಾರಲಿದೆ, ಅಂದರೆ ೯೮ ಮಿಲಿಯನ್ ಕಿಲೋಮೀಟರುಗಳು. ಇಷ್ಟು ಸಾಕು, ಖಗೋಳಾಭ್ಯಾಸ ನೆಡೆಸುತ್ತಿರುವ ಹವ್ಯಾಸಿಗಳು ತಮ್ಮ ವಿಶೇಷ ಉಪಕರಣಗಳನ್ನು ಮಂಗಳನತ್ತ ತಿರುಗಿಸಿ ಅಲ್ಲಿನ ಮೇಲೈ ಬಗೆಗಿನ ವಿಷಯಗಳನ್ನು ಸೆರೆಹಿಡಿಯಲು.

 

ಮುಂದೆ ಓದಿ…

ವಿಕಿಪೀಡಿಯಾ – ೯ನೇ ಹುಟ್ಟುಹಬ್ಬದ ಆಚರಣೆಯಲ್ಲಿ

ಪ್ರತಿ ಭಾರಿ ಗೂಗಲ್ ಮಾಡಿದಾಗೆಲ್ಲಾ ನನಗೆ ಸಿಗುವ ಮೊದಲನೇ ಕೊಂಡಿ ಸಾಮಾನ್ಯವಾಗಿ ವಿಕಿಪೀಡಿಯಾ ಎಂಬ ಆನ್ಲೈನ್ ಎನ್ಸೈಕ್ಲೋಪೀಡಿಯಾ ಅಂದ್ರೆ ಮುಕ್ತ ವಿಶ್ವಕೋಶದ್ದಾಗಿರುತ್ತದೆ. ಇದೇನಿದು ವಿಕಿಪೀಡಿಯಾ ಎಂಬ ಕುತೂಹಲದಿಂದ ಕಣ್ಣಾಡಿಸಿದಾಗ ಗೊತ್ತಾದದ್ದು ಇದು ನನ್ನ, ನಿಮ್ಮಂತಹ ಜನರೆ ಖುದ್ದಾಗಿ ಕೂತು ಬರೆದು ಬೆಳೆಸಿದ ವಿಶ್ವಕೋಶ ಎಂದು ಗೊತ್ತಾಯ್ತು. ನನಗೆ ಬೇಕಿರುವ ವಿಷಯದ ಬಗ್ಗೆ ಪುಟವೊಂದು ಇಲ್ಲವೆಂದಲ್ಲಿ, ಅಥವಾ ನಾನು ಓದುತ್ತಿರುವ ಪುಟದಲ್ಲಿನ ಮಾಹಿತಿ ಸರಿಯಿಲ್ಲ ಎನಿಸಿದಲ್ಲಿ ತಕ್ಷಣ ನಾನೇ ಅದನ್ನು ಬರೆದು ಪೇರಿಸುವ ಅವಕಾಶವನ್ನು ವಿಕಿಪೀಡಿಯಾ ಕೊಡುತ್ತದೆ. ಇಂದು ವಿಕಿಪೀಡಿಯಾ ೨೪೭ ಭಾಷೆಗಳಲ್ಲಿ ಲಭ್ಯವಿದ್ದು , ೧೪ ಮಿಲಿಯನ್ ಲೇಖನಗಳು, ೨೧ ಮಿಲಿಯನ್ ಬಳಕೆದಾರರ, ಸ್ವಯಂಪ್ರೇರಿತ ಸಂಪಾದಕರ ಸಹಾಯದಿಂದ ಕ್ರೂಡೀಕೃತಗೊಂಡಿದೆ.

ಪ್ರತಿಯೊಬ್ಬನಿಗೂ ಇಹದೊಳಗಿನ ಎಲ್ಲ ಮಾನವ ಜ್ಞಾನಭಂಡಾರಕ್ಕೆ ಮುಕ್ತ ಪ್ರವೇಶವನ್ನು ಕೊಡುವ ಲೋಕವನ್ನು ಕಲ್ಪಿಸಿಕೊಳ್ಳಿ. ಅದನ್ನೇ ನಾವು ಇಲ್ಲಿ ಬೆಳೆಸುತ್ತಿರುವುದು. – ವಿಕಿಪೀಡಿಯಾದ ಸೃಷ್ಟಿಕರ್ತ ಜಿಮ್ಮಿ ವೇಲ್ಸ್ ಹೇಳಿದ ಮಾತು.

ಜನವರಿ ೧೫, ೨೦೦೧ ರಂದು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್ ಶುರುಮಾಡಿದ ವಿಕಿಪೀಡಿಯಾ ಯೋಜನೆಗೆ ಈಗ ೯ ವರ್ಷದ ಪ್ರಾಯ. ನ್ಯೂಪಿಡಿಯಾ ಜೊತೆಗೆ ವಿಕಿ ತಂತ್ರಜ್ಞಾನದ ಮಿಲನ ವಿಶ್ವದ ಮುಕ್ತ ವಿಶ್ವಕೋಶ ವಿಕಿ + (ಎನ್ಸೈಕ್ಲೋ) ಪೀಡಿಯಾದ ಹುಟ್ಟಿಗೆ ಕಾರಣವಾಯ್ತು. ವಿಕಿಮೀಡಿಯಾ ಫೌಂಡೇಶನ್ ಇಂದು ವಿಕಿಪೀಡಿಯಾ ಉಸಿರಾಟಕ್ಕೆ ನೀರೆರೆಯುತ್ತಿದೆ. ಆದರೂ ಇದರ ನಿಜವಾದ ಜೀವಾಳ, ಮೇಲೆ ಹೇಳಿದಂತೆ ಸ್ವಯಂಪ್ರೇರಿತರಾಗಿ ವಿಕಿಪೀಡಿಯಾಕ್ಕೆ ತಮ್ಮ ಕಲ್ಪನೆಗೆ ನಿಲುಕಬಲ್ಲ ಎಲ್ಲಾ ವಿಷಯಗಳ ಬಗ್ಗೆ ತಮಗೆ ತಿಳಿದಿರುವ ಭಾಷೆಗಳಲ್ಲಿ ಲೇಖನಗಳನ್ನು ಬರೆದು, ಅದನ್ನು ಚೊಕ್ಕಮಾಡಿ, ಉಪಯುಕ್ತ ಕೊಂಡಿಗಳನ್ನೂ, ಸೂಚನೆಗಳನ್ನೂ, ಅನುಭಂದಗಳನ್ನೂ, ಉಲ್ಲೇಖಗಳನ್ನೂ ಇತ್ಯಾದಿ ಜೊತೆ ಸೇರಿಸಿ, ಕಾಲ ಕಾಲಕ್ಕೆ ಬರೆದ ಲೇಖನಗಳನ್ನು ಪ್ರಸ್ತುತ ರೂಪದಲ್ಲಿ, ಇತರರಿಗೆ ಓದಲು ಲಭ್ಯವಾಗುವಂತೆ ನೋಡಿಕೊಳ್ಳುವ ‘ವಿಕಿಪೀಡಿಯನ್ಸ್’ ಎಂದೇ ಕರೆಯಲ್ಪಡುವ ಅದರ ಬಳಕೆದಾರರು.

ಬೆಂಗಳೂರಿನಲ್ಲಿ ೧೬ರ ಶನಿವಾರ ಸಂಜೆ, ವಿಕಿಪೀಡಿಯಾ ಬಳಕೆದಾರರು ಕನ್ನಿಂಗ್ ಹ್ಯಾಮ್ ರಸ್ತೆಯ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಒಟ್ಟಿಗೆ ಸೇರಿ, ವಿಕಿಪೀಡಿಯಾದ ೯ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈಗಾಗಲೇ ವಿಕಿಪೀಡಿಯಾಗೆ ಅಗಾಧವಾಗಿ ತಮ್ಮ ಕಾಣಿಕೆಗಳನ್ನು ನೀಡಿರುವವರ ಜೊತೆ, ಕನ್ನಡ, ತಮಿಳು, ತೆಲುಗು, ಮಲಯಾಲಂ, ಮರಾಠಿ ಹೀಗೆ ಹತ್ತು ಹಲವು ಭಾಷೆಯ ವಿಕಿಪೀಡಿಯಾ ಬಳಕೆದಾರರು, ಹೊಸದಾಗಿ ವಿಕಿಪೀಡಿಯಾ ಬಗ್ಗೆ ತಿಳಿಯಬೇಕೆಂದು ಬಂದವರು, ವಿಕಿಪೀಡಿಯಾವನ್ನು ಬರಿ ಓದಲೆಂದೇ ಉಪಯೋಗಿಸುತ್ತಿದ್ದವರು, ಮಾಧ್ಯಮವರ್ಗದವರು ಇತ್ಯಾದಿ ಇಲ್ಲಿ ನೆರೆದಿದ್ದು ವಿಶೇಷವಾಗಿತ್ತು.

ಪರಸ್ಪರರ ಎಲ್ಲರ ಪರಿಚಯದ ನಂತರ, ಅರುಣ್ ರಾಮ್ ವಿಕಿಪೀಡಿಯಾ ಬಗ್ಗೆ ವಿವರಿಸಿ, ವಿಕಿಪೀಡಿಯಾದ ಇತರೆ ಯೋಜನೆಗಳಾದ ವಿಕಿನ್ಯೂಸ್, ವಿಕಿಬುಕ್ಸ್, ವಿಕಿಸೋರ್ಸ್, ವಿಕ್ಷ್ನರಿ, ವಿಕಿಕೋಟ್ಸ್ ಇತ್ಯಾದಿಗಳ ಬಗ್ಗೆ ಸಭಿಕರಲ್ಲಿದ್ದ ಮಾಹಿತಿಯನ್ನು ಕೆದಕಿ, ಹೊಸಬರಿಗೂ ಇವುಗಳ ಬಗ್ಗೆ ಮಾಹಿತಿ ವಿನಿಮಯಕ್ಕೆ ಕಾರಣರಾದರು. ಹೊಸ ವಿಕಿಪೀಡಿಯಾ ಬಳಕೆದಾರರ ಪ್ರಶ್ನೆಗಳು ಮಕ್ಕಳಿಗಾಗಿ ವಿಕಿಪೀಡಿಯಾ, ಅದಲ್ಲಿರುವ ಲೇಖನಗಳ ಸುರಕ್ಷತೆ, ಲೇಖನ ಇತ್ಯಾದಿಗಳಲ್ಲಿನ ನಿಖರತೆಯ ಸುತ್ತಮುತ್ತ ಸುಳಿದಾಡಿದವು. ಅವರ ಪ್ರಶ್ನೆಗಳಿಗೆ ವಿಕಿಪೀಡಿಯಾದಲ್ಲಿನ ಸಂಪಾದಕರ ಜವಾಬ್ದಾರಿಯುತ ಕೆಲಸದ ಬಗ್ಗೆ, ಅಲ್ಲಿನ ಹಕ್ಕುಬಾಧ್ಯತೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದ ಇತರೆ ಬಳಕೆದಾರರು ಚರ್ಚೆಯ ಕೊನೆಯವರೆಗೂ ಎಲ್ಲರನ್ನೂ ಹಿಡಿದಿಡುವಂತೆ ಮಾಡಿದರು.

ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಇತ್ಯಾದಿ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಿ, ಸಂಪಾದಕರಾಗಿ ಕೆಲಸ ಮಾಡಿದ ಅನೇಕರು, ತಮ್ಮ ಭಾಷೆಯ ವಿಕಿಪೀಡಿಯಾ ಅಂಕಿಅಂಶಗಳ ಜೊತೆಗೆ, ಅದರ ಬೆಳವಣಿಗೆ, ಬಳಕೆದಾರರು ಹೇಗೆ ವಿಕಿಪೀಡಿಯಾಕ್ಕೆ ಸ್ಪಂದಿಸುತ್ತಿದ್ದಾರೆ, ಹೊಸ ಬಳಕೆದಾರರು ವಿಕಿಪೀಡಿಯಾ ಬಳಸಲು ಇರುವ ತಾಂತ್ರಿಕ ತೊಡಕುಗಳು, ಸರ್ಕಾರದಿಂದ ತಮಗೇನಾದರೂ ಪ್ರೋತ್ಸಾಹ ದೊರೆಯುತ್ತಿದೆಯೇ?, ಸಾರ್ವಜನಿಕವಾಗಿ ವಿಕಿಪೀಡಿಯಾವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ? ಮುಂದೆ ಇದರ ಬೆಳವಣಿಗೆಗೆ ಹೇಗೆ ಜೊತೆಗೂಡಿ ಕೆಲಸಮಾಡಬಹುದು ಎಂಬೆಲ್ಲ ಮಾಹಿತಿಗಳ ಕುರಿತು ವಿಷಯಗಳನ್ನು ಹಂಚಿಕೊಂಡರು. ತಮಿಳು ವಿಕಿಯ ರವಿ ನಮ್ಮೊಡನೆ ಸಂವಾದಿಸಿದ್ದು ದೂರವಾಣಿಯ ಮೂಲಕ.

ಮಲಯಾಳಂ ವಿಕಿಯ ಸಿಜು ಕೇರಳ ಸರ್ಕಾರದಿಂದ ಸಿಗುತ್ತಿರುವ ಬೆಂಬಲದ ಜೊತೆ ಅಲ್ಲಿನ ಸ್ಕೂಲ್ ವಿಕಿ ಬಗ್ಗೆ ವಿವರಿಸಿದರೆ, ತೆಲುಗಿನ ಅರ್ಜುನ್ ರಾವ್ ಸರ್ಕಾರದಿಂದ ಎನೂ ಸಹಾಯದೊರೆಯದಿದ್ದರೂ ಸ್ವಯಂ ಪ್ರೇರಿತ ಬಳಕೆದಾರರು ಮಾಡುತ್ತಿರುವ ಕೆಲಸಗಳ ಬಗ್ಗೆ ವಿವರಿಸಿದರು. ಹರಿಪ್ರಸಾದ್ ನಾಡಿಗ್ ಹಾಗೂ ಡಾ| ಯು.ಬಿ ಪವನಜ ಕನ್ನಡ ವಿಕಿಪೀಡಿಯಾ, ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಕಣಜ.ಇನ್ ಗಳ ಬಗ್ಗೆ ಮಾಹಿತಿವಿನಿಮಯ ಮಾಡಿಕೊಂಡರು.

ಕಿರಣ್, ಪ್ರಮೋದ್, ಅರ್ಜುನ್ ರಾವ್, ಅರುಣ್ ರಾಮ್, ಡಾ| ಯು.ಬಿ ಪವನಜ ಒಳಗೊಂಡ ತಜ್ಞರ ಸಮಿತಿ ತಂತ್ರಜ್ಞಾನ, ವಿಕಿಪೀಡಿಯಾ ಬೆಳವಣಿಗೆ, ಸರ್ಕಾರದ ಪಾತ್ರ ಇತ್ಯಾದಿಗಳ ಬಗ್ಗೆ ಒಂದು ಘಂಟೆಯ ಕಾಲ ಸುಧೀರ್ಘವಾಗಿ ಚರ್ಚಿಸಿದರು. ಬಹುಭಾಷಾ ವೆಬ್ಸಸೈಟ್ ಗಳ ಬೆಳವಣಿಗೆ, ಅವುಗಳ ಮೇಲ್ವಿಚಾರಿಕೆ, ಅದಕ್ಕೆ ಬೇಕಿರುವ ತಂತ್ರಾಂಶ, ತಂತ್ರಜ್ಞಾನದ ಬಗ್ಗೆ ಸ್ವತಂತ್ರ ಹಾಗೂ ಮುಕ್ತ ತಂತ್ರಾಂಶ ಬಳಸುತ್ತಿರುವ ವಿಕಿಪೀಡಿಯಾದಿಂದ ನಮ್ಮ ಸರ್ಕಾರಗಳು ಕಲಿಯುವುದು ಬಹಳವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತು. ಒಟ್ಟಾರೆ ವಿಕಿಪೀಡಿಯಾ ಬಳಕೆದಾರರಿಗೆ ಒಂದು ವಿಶಿಷ್ಟ ವೇದಿಕೆಯನ್ನು ಈ ಕಾರ್ಯಕ್ರಮ ರೂಪಿಸಿಕೊಟ್ಟಿತು.

ಬ್ಲೂ ಮೂನ್ ಜೊತೆ ಬಂದ ಹೊಸ ವರ್ಷ ೨೦೧೦

ಗ್ರಹಣದ ಜೊತೆ ನೀಲವರ್ಣದಿಂದ ಕಂಡು ಬಂದ ಚಂದ್ರ 

ಈ ಚಂದ್ರ ಪೂರ್ಣಪ್ರಮಾಣದಲ್ಲಿ ಇಂದು ಕಂಡಿದ್ದು, ಮತ್ತೆ ಈ ಒಂದು ನೋಟ ನಮಗೆ ಸಿಗುವುದು ೨೦೨೮ಕ್ಕೆ. 

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು…

 

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಕೊನೆಯ ಭಾಗ

ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು. ತಣ್ಣನೆ ಗಾಳಿ ಬೀಸುತ್ತಾ, ಹೊದ್ದಿಗೆ ಸರಿಯಾಗಿ ಕಾಲಿಗೆ ಹೊದ್ದಿದೆಯೇ ಎಂದು ಪರೀಕ್ಷಿಸಿದ್ದಷ್ಟೇ ಗೊತ್ತು. ಮತ್ತ್ತೆ ಎಚ್ಚರವಾದಾಗ ಮೈಮೇಲೆ ಒಂದಷ್ಟು ಹೆಚ್ಚಿನ ಬಟ್ಟೆಗಳಿದ್ದದ್ದೂ, ಬೇರೆಯವರು ಮಾತನಾಡುತ್ತಿದ್ದ ಕಿರುದನಿ ಕೇಳಿ ಬಂತು. ಕಣ್ಣು ಬಿಡುತ್ತಿದ್ದಂತೆ ಕಂಡಿದ್ದು ಎದ್ದು ಕುಳಿತಿದ್ದ ಪವಿತ್ರಾ, ರವಿ ಮತ್ತು ಅರವಿಂದ. ನಾನು ಎಚ್ಚರವಾದಂತೆ, ನಾವೇನೋನೋ ಕೇಳಿದ್ವಿ ಕೇಳಿಸ್ಲಿಲ್ವೇನೋ? ನೋಡಿಲ್ಲಿ ಸಿಕ್ಕಾ ಪಟ್ಟೆ ನಡುಗ್ತಿದ್ದೆ ಅಂತ ಇದನ್ನೆಲ್ಲಾ ಹೊದಿಸಿದ್ದೇವೆ ಅಂದಾಗ ಹೋ! ಎಂದದ್ದಷ್ಟೇ ಗೊತ್ತು.. ಮತ್ತೆ ಸ್ವಲ್ಪ ಎದ್ದು ಕೂತೆ.

 

ಮುಂದೆ ಓದಿ…