
ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು.. ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದು ಈಗ ಸಾಧ್ಯವಿದೆ ಎಂದು ಜಪಾನ್ ನ ಹೊಸದೊಂದು ಯೋಜನೆ ಹೇಳುತ್ತಿದೆ.
ಇತ್ತೀಚೆಗೆ ಜಪಾನ್ ಅಂತರಿಕ್ಷದಲ್ಲಿ ಸೌರ ವಿದ್ಯುತ್ ಸ್ಥಾವರದ ಸ್ಥಾಪನೆಗೆ ೨೧ ಬಿಲಿಯನ್ ಡಾಲರಿನ ಹೊಸ ಯೋಜನೆಯೊಂದನ್ನು ಹಾಕಿ ಕೊಂಡಿದೆ. ಈ ಸ್ಥಾವರ ಒಂದು ಗಿಗಾವ್ಯಾಟ್ ನಷ್ಟು ವಿದ್ಯುತ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು ೨೯೪,೦೦೦ ಮನೆಗಳಿಗೆ ಬೆಳಕು ನೀಡಬಲ್ಲುದು. ಈ ಯೋಜನೆಗೆ ಮಿಸ್ಠುಬಿಶಿ ಎಲೆಕ್ಟ್ರಿಕ್ ಕಂಪನಿ ಮತ್ತು ಐ.ಎಚ್.ಐ ಕಾರ್ಪೊರೇಷನ್ ನ ಬೆಂಬಲವಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ಅಂತರಿಕ್ಷದಲ್ಲಿ ಸಂಗ್ರಹಣೆ ಮಾಡಲಾಗುವ ವಿದ್ಯುತ್ ಅನ್ನು ಯಾವುದೇ ತಂತಿಗಳ ಅವಶ್ಯಕತೆ ಇಲ್ಲದೆ ಭೂಮಿಗೆ ಸಾಗಿಸಬಹುದಾದ ತಂತ್ರಜ್ಞಾನ ಅಭಿವೃದ್ದಿ ಪಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇವೆಲ್ಲಾ ಸಾಂಗವಾಗಿ ನೆರವೇರಿದರೆ ೨೦೧೫ರ ಹೊತ್ತಿಗೆ ಜಪಾನ್ ಸಣ್ಣದೊಂದು ಉಪಗ್ರಹದಲ್ಲಿ ಸೋಲಾರ್ ಫಲಕಗಳನ್ನು ಬಳಸಿ ಈ ಸಂಶೋದನೆಯನ್ನು ಪರೀಕ್ಷಿಸಲಿದೆ.
ಚಿತ್ರ:– ಇನ್ ಹೆಬಿಟ್ಯಾಟ್
ಇದರ ಬಗೆಗಿನ ಹೆಚ್ಚಿನ ಮಾಹಿತಿಗೆ ಇನ್ಹೆಬಿಟ್ಯಾಟ್ ನ ಈ ಕೊಂಡಿ ನೋಡಿ.



